ಬ್ರೆಜ್ನೆವ್, ಲೀಯೊನಿದ್ ಇಲ್ಯಿಚ್
	1906-82. ಸೋವಿಯತ್ ಒಕ್ಕೂಟದ ಅಧ್ಯಕ್ಷ. ಭಾರತ ಸೋವಿಯತ್ ಸ್ನೇಹದ ರೂವಾರಿ, ಸುಮಾರು ಹದಿನೆಂಟು ವರ್ಷಗಳ ಕಾಲ ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟದ ನಾಯಕ. "ಸ್ಟಾಲಿನ್ನರನ್ನು ಬಿಟ್ಟರೆ ಬೇರೆ ಯಾರು ಇವರಿಗಿಂತ ಹೆಚ್ಚು ದೀರ್ಘ ಕಾಲ ಆ ದೇಶವನ್ನಾಳಲಿಲ್ಲ. ಸ್ಟಾಲಿನ್ 29 ವರ್ಷಗಳ ಕಾಲ ಅಧಿಕಾರ ನಡೆಸಿದ್ದರು.

	ಬ್ರೆಜ್ನೆವ್ 1906 ಡಿಸೆಂಬರ್ 19ರಂದು ಉಕ್ರೇನಿನಲ್ಲಿ ನೀಪರ್ ನದೀ ಕಣಿವೆಯ ಕೈಗಾರಿಕಾ ಪ್ರದೇಶದ ದ್ರೆಪ್ರೊದ್‍ಜೆರ್‍ಜ್ಹಿನ್ಸ್‍ಕ್ ಎಂಬಲ್ಲಿ ಜನಿಸಿದರು. ಒಂದನೆಯ ಮಹಾಯುದ್ಧ ಆರಂಭವಾದಾಗ ಇವರಿಗೆ ಏಳು ವರ್ಷ ವಯಸ್ಸು. ಬೋಲ್ಟೆವಿಕ್ ಕ್ರಾಂತಿ ಸಂಭವಿಸಿದಾಗ ಹನ್ನೊಂದು ವರ್ಷ. ಅನಂತರ ಸೋವಿಯತ್ ರಷ್ಯಾದಲ್ಲಿ ಅಂತರ್ಯದ್ಧವೂ ಕ್ಷಾಮವೂ ಸಂಭವಿಸಿದುವು. ಹದಿ ವಯಸ್ಸಿನ ಹುಡುಗ ಬ್ರೆಜ್ನೆವರ ಮೇಲೆ ಇವೆಲ್ಲ ವಿಶೇಷ ಪರಿಣಾಮ ಬೀರಿದವು. ಕಮ್ಯೂನಿಸ್ಟ್ ಕ್ರಾಂತಿಯಿಂದ ಇವರೂ ಪ್ರಭಾವಿತರಾದರು.

	ಬ್ರೆಜ್ನೆವ್ ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ಯುವ ಕಮೂನಿಸ್ಟ್ ಲೀಗ್ ಸೇರಿದರು. ಕಮ್ಯೂನಿಸ್ಟ್ ಪಕ್ಷದ ಸದಸ್ಯರಾದಾಗ ಇವರಿಗೆ ಇಪ್ಪತ್ತೈದು ವರ್ಷ ವಯಸ್ಸು.

	ಸೋವಿಯತ್ ಕ್ರಾಂತಿವೀರ ಲೆನಿನ್ ತೀರಿಕೊಂಡು ಜೋಸೆಫ್ ಸ್ಟಾಲಿನ್ ಆ ದೇಶದ ಅಧಿಕಾರ ಸೂತ್ರ ವಹಿಸಿದ ಮೇಲೆ, 1930ರ ದಶಕದಲ್ಲಿ ವಿರೋಧಿಗಳನ್ನೆಲ್ಲ ನಿವಾರಿಸುವ ಕ್ರೂರ ಕ್ರಮಗಳು ಆ ದೇಶದಲ್ಲಿ ಜಾರಿಗೆ ಬಂದಿದ್ದುವು. ಬ್ರೆಜ್ನೆವ್ ಸ್ಟಾಲಿನ್ನರ ಸಂಶಯಕ್ಕೆ ತುತ್ತಾಗದೆ ಮುನ್ನಡೆದರು. ಎರಡನೆಯ ಮಹಾಯುದ್ಧದಲ್ಲಿ ಸೋವಿಯತ್ ದೇಶ ಬಹಳ ಕಷ್ಟ ನಷ್ಟ ಅನುಭವಿಸಿತು. ಯುದ್ಧಾನಂತರ ಮತ್ತೆ ಸ್ಟಾಲಿನ್ನರಿಗೆ ಒಲ್ಲದವರನ್ನೆಲ್ಲ ನಿರ್ನಾಮಗೊಳಿಸುವ ಕಾರ್ಯಕ್ರಮಗಳು ಮುಂದುವರಿದುವು. ಸ್ಟಾಲಿನ್ ತೀರಿಕೊಂಡ ಕೆಲಕಾಲದ ಮೇಲೆ, ನಿಕಟ ಕ್ರುಶ್ಚೇವ್ ಸೋವಿಯತ್ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿಯಾದಾಗ, ಅವರು ಸ್ಟಾಲಿನ್ನರ ಕಾಲದ ಘೋರ ಕೃತ್ಯಗಳನ್ನೆಲ್ಲ ಅಲ್ಲಗಳೆದು, ಅವರು ಜಾರಿಗೆ ತಂದಿದ್ದ ನೀತಿಗಳಿಂದ ಭಿನ್ನವಾದ ಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಪಶ್ಚಿಮದ ದೇಶಗಳೊಂದಿಗೆ ಸ್ಪರ್ಧಿಸಿ, ತಮ್ಮ ವ್ಯವಸ್ಥೆ ಅವರದಕ್ಕಿಂತ ಉತ್ತಮವಾದುದೆಂಬುದನ್ನು ಪ್ರಪಂಚಕ್ಕೆ ಮನವರಿಕೆ ಮಾಡಿಕೊಡುವುದು ಕ್ರುಶ್ಚೇವರ ನೀತಿಯಾಗಿತ್ತು.

	ಆದರೆ ಕ್ರುಶ್ಚೇವ್ ನೀತಿಗೆ 1962ರಲ್ಲಿ ಭಾರಿ ಪೆಟ್ಟು ಬಿತ್ತು. ಅಮೆರಿಕದ ನೆರೆಯ ಪ್ರದೇಶದಲ್ಲಿ ಕ್ಯಾರಿಬೀಯನ್ ಕಡಲಿನ ನಡುವೆ ಇರುವ ಕ್ಯೂಬದಲ್ಲಿ ಸೋವಿಯತ್ ಕ್ಷಿಪಣಿಗಳನ್ನು ಸ್ಥಾಪಿಸುವ ಕ್ರಮದ ವಿರುದ್ದ ಅಮೆರಿಕ ಸರ್ಕಾರ ಉಗ್ರಕ್ರಮ ಕೈಗೊಂಡಿತು. ಅಮೆರಿಕ ಮತ್ತು ಸೋವಿಯತ್ ದೇಶಗಳ ನಡುವೆ ಘರ್ಷಣೆ ಉಂಟಾಗಿ ಇನ್ನೊಂದು ಮಹಾಯುದ್ಧಕ್ಕೆ ಕಿಡಿ ಹೊತ್ತಿಸುವ ಅಪಾಯವಿತ್ತು. ಆಗ ಕ್ರುಶ್ಚೇವರು ಹಿನ್ನಡೆಯಬೇಕಾಯಿತು. ಇದರಿಂದಲೂ ಇತರ ಹಲವು ಬೆಳವಣಿಗೆಗಳಿಂದಲೂ ಕ್ರುಶ್ಚೇವ್ ಸ್ವದೇಶದಲ್ಲಿ ವಿಶೇಷವಾದ ಟೀಕೆಗೆ ಗುರಿಯಾದರು. ಅಂತಿಮವಾಗಿ 1964ರಲ್ಲಿ ಕ್ರುಶ್ಚೇವ್ ಪದಚ್ಯುತಿಗೊಂಡರು. ಅವರ ಸ್ಥಾನದಲ್ಲಿ ಬ್ರೆಜ್ನೆವ್ ಸೋವಿಯತ್ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿ ಆ ದೇಶದ ಅಧಿಕಾರ ಸೂತ್ರ ವಹಿಸಿಕೊಂಡರು. ಅನಂತರ ಅವರು ಸೋವಿಯತ್ ಅಧ್ಯಕ್ಷರೂ ಆದರು.

	ಬ್ರೆಜ್ನೆವರ ಅಧಿಕಾರಾವಧಿಯಲ್ಲಿ ಸೋವಿಯತ್ ದೇಶ ಹಲವು ದಿಕ್ಕುಗಳಲ್ಲಿ ಮುನ್ನಡೆ ಸಾಧಿಸಿತು. ಸೋವಿಯತ್ ಶಸ್ತ್ರಾಸ್ತ್ರ ಬಲ, ಸೇನಾಬಲ ವರ್ಧಿಸಿದುವು. ಅಮೆರಿಕಕ್ಕೆ ಸರಿ ಮಿಗಿಲಾದ ಮಹಾಶಕ್ತಿಗಾಗಿ ಸೋವಿಯತ್ ದೇಶ ಬೆಳೆಯಿತು.

	ಬ್ರೆಜ್ನೆವರ ಆಡಳಿತದ ಕಾಲದಲ್ಲಿ ಆ ದೇಶ ಬಹಳಮಟ್ಟಿಗೆ ಶಾಂತಿಯನ್ನು ಅನುಭವಿಸಿತು. ದೇಶದಲ್ಲಿ ಸುಭದ್ರತೆ ಉಂಟಾಯಿತು. ಸ್ಟಾಲಿನ್ನರ ಕಾಲದ ಭಯಗ್ರಸ್ತ ಆಡಳಿತವನ್ನು ತಪ್ಪಿಸಿ ನೆಮ್ಮದಿಯ ವಾತಾವರಣವನ್ನು ಉಂಟುಮಾಡಿದ್ದ ಕ್ರುಶ್ಚೇವರ ನೀತಿ ಮುಂದುವರಿಯಿತು. ಅಧಿಕಾರ ಕಳೆದು ಕೊಂಡವರಾಗಲಿ, ಪ್ರಭುತ್ವದ ಅಪ್ರಿಯತೆ ಗಳಿಸಿಕೊಂಡವರಾಗಲಿ ಜೀವ ಕಳೆದುಕೊಳ್ಳುವ ಭೀತಿ ತಪ್ಪಿತು. ಆದಾಗ್ಯೂ ಸೋವಿಯತ್ ದೇಶದಲ್ಲಿ ನಿರ್ಮಾಣವಾಗುತ್ತಿದ್ದ ಹೊಸ ಸಾಮಾಜಿಕ ಚೌಕಟ್ಟನ್ನೊಪ್ಪಿಕೊಳ್ಳುವ, ಅದನ್ನು ಟೀಕಿಸುವ ವ್ಯಕ್ತಿಗಳು ಸ್ಥಾನಮಾನ ಕಳೆದುಕೊಳ್ಳಬೇಕಾಗಿತ್ತು. ಬೇಜ್ನೆವರು ಬಂದೂಕ ಮತ್ತು ಬೆಣ್ಣೆಯ ನೀತಿ ಅನುಸರಿಸಿ ಯಶಸ್ವಿಯಾದರು. ಪಶ್ಚಿಮ ಮಧ್ಯ ದೇಶಗಳ ಎದುರು ಬಲಸಂವರ್ಧನೆ, ವೈವಿಧ್ಯಮಯವಾದ, ಅತಿಭೀಕರ ಸಂಪ್ರದಾಯವಾದಿ ಹಾಗೂ ಪರಮಾಣು ಅಸ್ತ್ರಗಳ ಅಭಿವೃದ್ಧಿ; ಜೊತೆ ಜೊತೆಗೆ ನಾಡಿನ ಉದ್ದಗಲಕ್ಕೂ ಬೆಣ್ಣೆಯ ಪಡಿತರ, ಸೋವಿಯತ್ ದೇಶವನ್ನು ಬಲಪಡಿಸಿ, ಆ ವ್ಯವಸ್ಥೆಗೆ ಭದ್ರ ಭವಿಷ್ಯದ ಬುನಾದಿಯನ್ನು ನಿರ್ಮಿಸಲು ಆಂತರಿಕವಾಗಿ ಅನುಭೋಗದ ನಿಯಂತ್ರಣ ಅಗತ್ಯವೆಂಬ ನೀತಿ-ಇವು ಮುಂದುವರಿದುವಾದರೂ ಸಾಮಾನ್ಯರ ಜೇವನವನ್ನು ಉತ್ತಮಪಡಿಸುವುದಕ್ಕೂ ಕ್ರಮ ತೆಗೆದುಕೊಂಡರು. ಶಾಂತಿ ಹಾಗೂ ಕಮ್ಯೂನಿಸಮ್‍ಗಳ ಅಧ್ವರ್ಯು ಎಂದು ಬ್ರೆಜ್ನೆವ್ ಪ್ರಸಿದ್ಧರಾಗಿದ್ದಾರೆ. ಲೆನಿನ್ ಆರಂಭಿಸಿದ ದ್ವ್ಯೆತ ನೀತಿಯೇ ಇದು. ಮಾಕ್ರ್ಸ್‍ವಾದ ಲೆನಿನ್‍ವಾದಗಳನ್ನು ಬ್ರೆಜ್ನೆವರು ಅವುಗಳ ತಾರ್ಕಿಕ ನೆಲೆಯುತ್ತ ಮುನ್ನಡೆಸಿದರೆನ್ನಲಾಗಿದೆ. ಶಾಂತಿಯ ಪ್ರತಿಪಾದಕರಾಗಿ ಬ್ರೆಜ್ನೆವ್ ಮಾಡಿದ ಮಹಾಸಾಧನೆಯೆಂದರೆ ಹೆಲ್ಸಿಂಕಿ ಒಡಂಬಡಿಕೆ. ಯೂರೋಪಿನಲ್ಲಿ ಶಾಂತಿ ಏರ್ಪಡಬೇಕು, ಭದ್ರತೆಯೂ ಉಂಟಾಗಬೇಕು; ಆ ಖಂಡ ಇನ್ನೊಂದು ಯುದ್ಧದ ಸುಳಿಯೊಳಕ್ಕೆ ಸಿಲುಕಬಾರದು; ಪೂರ್ವ-ಪಶ್ಚಿಮಗಳ ನಡುವೆ ಸೌಮನಸ್ಯ ಸಾಧಿಸಬೇಕು-ಇದು ಹೆಲ್ಸಿಂಕಿಯಲ್ಲಿ ಮಾಡಿಕೊಳ್ಳಲಾದ ಒಡಂಬಡಿಕೆ ಆಶಯ. 

	ಆದರೆ ಈ ಮನೋಭಾವಕ್ಕೆ ಮಾರಕವಾದ ಕ್ರಮಗಳನ್ನೂ ಬ್ರೆಜ್ನೆವ್ ತೆಗೆದುಕೊಂಡರೆಂದು ಆಪಾದಿಸಲಾಗಿದೆ. ಪೂರ್ವ ಯೂರೋಪಿನ ಕಮ್ಯೂನಿಸ್ಟ್ ದೇಶವಾದ ಚೆಕೊಸ್ಲವಾಕಿಯದ ಸರ್ಕಾರ ಉದಾರನೀತಿಯನ್ನು ಅನುಸರಿಸ ತೊಡಗಿದಾಗ, ಪಶ್ಚಿಮದ ಸಮಾಜದ ರೀತಿ ನೀತಿಗಳನ್ನು ಜಾರಿಗೆ ತರುವ ಹಾದಿಯಲ್ಲಿ ನಡೆದಾಗ, ಕಮ್ಯೂನಿಸ್ಟ್ ಸಮಾಜದ ಕಟ್ಟುಪಾಡುಗಳನ್ನು ಸಡಿಲಿಸಿದಾಗ ಬ್ರೆಜ್ನೆವರು ಸೋವಿಯತ್ ಸೇನೆಯನ್ನು ಆ ದೇಶಕ್ಕೆ ನುಗ್ಗಿಸಿ ಅಲ್ಲಿಯ ಸರ್ಕಾರವನ್ನು ಮಣಿಸಿದರು ಎಂದು ಆಪಾದಿಸಲಾಗಿದೆ. ಆದರೆ ಸಮಾಜವಾದಕ್ಕೆ ಅಪಾಯ ಒದಗಿದಾಗ, ತನ್ನ ವಲಯದ ಯಾವುದೇ ದೇಶ ಕಮ್ಯೂನಿಸಮ್ಮಿನ ಏರಿಕೆಯ ಮಾರ್ಗ ಬಿಟ್ಟು ಸಡಿಲ ಬಾಳಿನ ಜಾರಿಕೆಯ ಹಾದಿ ಹಿಡಿದಾಗ ಮಧ್ಯೆ ಪ್ರವೇಶಿಸಿ ಅದನ್ನು ಹದ್ದುಬಸ್ತಿಗೆ ಒಳಪಡಿಸುವುದು ತನ್ನ ಕರ್ತವ್ಯ ಎಂದು ಸೋವಿಯತ್ ಸರ್ಕಾರ ಸಾರಿತು. ಇದು ಬ್ರೆಜ್ನೆವ್ ಸೂತ್ರಕ್ಕೆ ಅನುಗುಣವಾಗಿದೆಯೆಂದು ಹೇಳಿತು. ಆಘ್ಘಾನಿಸ್ತಾನ, ಪೋಲೆಂಡುಗಳಲ್ಲೂ ಬ್ರೆಜ್ನೆವರ ಸರ್ಕಾರ ಇದೇ ಕ್ರಮ ಅನುಸರಿಸಿತು. ಸೋವಿಯತ್ ದೇಶ ಇತರ ದೇಶಗಳೊಂದಿಗೆ ಸ್ನೇಹದ ನೀತಿ ಅನುಸರಿಸುವುದಾಗಲಿ, ಅದರ ವ್ಯವಸ್ಥೆಗೆ ಧಕ್ಕೆ ತಗಲುವ ಸ್ಥಿತಿ ಬಂದಾಗ ಎಷ್ಟಾದರೂ ಬಲವನ್ನು ಪ್ರಯೋಗಿಸಿ ಅದನ್ನು ರಕ್ಷಿಸಲು ಹಿಂದೆಗೆಯುವುದಿಲ್ಲವೆಂದು ಬ್ರೆಜ್ನೆವ್ ತೀರಿಸಿಕೊಳ್ಳಲು ಕೆಲವೇ ದಿನಗಳ ಹಿಂದೆ ತಮ್ಮ ಎರಡು ಭಾಷಣಗಳಲ್ಲಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು. ಬ್ರೆಜ್ನೆವರ ನಿಲುವು ಎಂಥದೆಂಬುದನ್ನು ಈ ಭಾಷಣಗಳು ಸ್ಪಷ್ಟಪಡಿಸುತ್ತವೆ. ಸೋವಿಯತ್ ದೇಶದ ವಿರುದ್ಧ ಮಿಲಿಟರಿ ಮೇಲುಗೈ ಸ್ಥಾಪಿಸಲು ತಾನೆಂದೂ ಬಿಡುವುದಿಲ್ಲವೆಂದು ಬ್ರೆಜ್ನೆವ್ ಸಾರಿದ್ದರು.

	ಬ್ರೆಜ್ನೆವ್ ಭಾರತದ ಮಿತ್ರರಾಗಿದ್ದರು. ಇವರ ಕಾಲದಲ್ಲಿ ಭಾರತ-ಸೋವಿಯತ್ ಸ್ನೇಹ ಸಂಬಂಧ ಬೆಳೆಯಿತು. ಹದಿನೈದು ವರ್ಷಗಳ ಮೈತ್ತಿ ಒಪ್ಪಂದ ಸಾಧಿಸಿತು (1971). ಬಾಂಗ್ಲಾ ವಿಮೋಚನಾ ಸಮರದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಲು ಸಾಧ್ಯವಾದ್ದು ಸೋವಿಯತ್ ಸ್ನೇಹ ಬಲದಿಂದಾಗಿ.

	ಬ್ರೆಜ್ನೆವ್ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಸೋವಿಯತ್ ಪಾಲಿಟ್‍ಬ್ಯೂರೋದಲ್ಲಿ ಬ್ರೆಜ್ನೆವ್ ಯಾವಾಗಲೂ ಭಾರತದ ಪರವಾಗಿ ವಾದಿಸುತ್ತಿದ್ದರು. ಭಾರತದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದರ ಬಗ್ಗೆ ಸ್ನೇಹಪರ ನಿಲುವು ತಳೆದಿದ್ದ ಬ್ರೆಜ್ನೆವ್ ಸದಾ ಭಾರತಕ್ಕೆ ಬೆಂಬಲ ನೀಡುತ್ತಿದ್ದರು. ಇವರು 1982 ನವೆಂಬರ್ 10ರಂದು ಹೃದಯಘಾತದಿಂದ ತೀರಿಕೊಂಡರು.
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ